ರಾವ್, ಯು ಆರ್
ಪ್ರಪಂಚದ ಆಕಾಶ ರಾಷ್ಟ್ರಗಳ ಸಾಲಿನಲ್ಲಿ ಭಾರತಕ್ಕೆ ಯುಕ್ತ ನೆಲೆ ದೊರಕಿಸಿದ, ಭಾರತದ ಉಪಗ್ರಹ ಕಾರ್ಯಕ್ರಮಕ್ಕೆ ಭದ್ರಬುನಾದಿಯನ್ನು ಹಾಕಿಕೊಟ್ಟ ಖ್ಯಾತ ಅಂತರಿಕ್ಷ ವಿe್ಞÁನಿ. ಪೂರ್ಣ ಹೆಸರು ಉಡುಪಿ ರಾಮಚಂದ್ರರಾವ್. ಉಡುಪಿಯ ಸಮೀಪದ ಮಾರ್ಪಳ್ಳಿಯಲ್ಲಿ 1932 ಮಾರ್ಚ್ 10 ರಂದು ಜನನ. ತಂದೆ ಲಕ್ಷ್ಮೀನಾರಾಯಣರಾವ್, ತಾಯಿ ಕೃಷ್ಣವೇಣಿ ಅಮ್ಮ. ಸುಸಂಸ್ಕøತ ಹಾಗೂ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಲು ಕಷ್ಟಪಟ್ಟು ಮುಗಿಸಿ ಉಡುಪಿಯ ಕ್ರಿಶ್ಚನ್ ಪ್ರೌಢ ಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆದು 1947ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ವ್ಯಾಸಂಗಮಾಡಿ ಮದರಾಸು ವಿಶ್ವವಿದ್ಯಾಲಯದ ಬಿ.ಎಸ್.ಸಿ. ಪದವಿ ಪಡೆದರು. (1951). ಆಗಿನ ಕಾಲಕ್ಕೆ ಭಾರತದಲ್ಲಿ ಸ್ಥಾಪನೆಗೊಂಡ ಮೊದಲ ಕೆಲವು ವಿಶ್ವವಿದ್ಯಾಲಯಗಳ ಪೈಕಿ ಒಂದಾದ ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಿ ಇವರು ಭೌತವಿe್ಞÁನದಲ್ಲಿ ಸ್ನಾತಕೋತ್ತರ ಪದವಿ ಪಡೆದರು (1953). ಇದಾದ ಬಳಿಕ ಶಿಕ್ಷಣವನ್ನು ಮುಂದುವರೆಸಿದ ರಾಯರು ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲ್ಯಾಬೋರೇಟರಿಯಲ್ಲಿ ಖ್ಯಾತವಿe್ಞÁನಿ ವಿಕ್ರಂ ಸಾರಾಭಾಯ್ ಅವರ ಮಾರ್ಗದರ್ಶನದಲ್ಲಿ ವಿಶ್ವಕಿರಣಗಳ (ಕಾಸ್ಮಿಕ್ ರೇಸ್) ಬಗ್ಗೆ ಸಂಶೋಧನೆ ಮುಂದುವರೆಸಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿ ಪಡೆದರು. (1960)

ಮುಂದೆ ರಾವ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರತಿಷ್ಠಿತ ಮ್ಯಾಸಚ್ಯೂಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ ತೆರಳಿ ಅಲ್ಲಿ ವಿಶ್ವಕಿರಣಗಳ ಬಗ್ಗೆ ಉನ್ನತ ಸಂಶೋಧನೆಯಲ್ಲಿ ನಿರತರಾದರು. ಈ ಸಂಶೋಧನೆಯ ಪರಿಣಾಮವಾಗಿ ಹಾಗೂ ಮ್ಯಾರಿನರ್-2 ಎಂಬ ಆಕಾಶಶೋಧನ ನೌಕೆಯಿಂದ ಒದಗಿಬಂದ ಮಾಹಿತಿಗಳಿಂದ ಹಾಗೂ ಹಗಲು ಇರುಳುಗಳ ನಡುವೆ ಬ್ರಹ್ಮಾಂಡದಿಂದ ಬರುವ ವಿಶ್ವಕಿರಣಗಳ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ ಎಂಬುದನ್ನು ಇವರು ಕಂಡುಕೊಂಡರು. ಇವರು ಸೂರ್ಯನಿಂದ ಪರಮಾಣು ಕಣಗಳ ಪ್ರವಾಹ (ಸೌರಮಾರುತ) ನಿರಂತರವಾಗಿ ಹೊರಡುತ್ತದೆ ಎಂಬುದನ್ನು ಗುರುತಿಸಿ ಆ ಪ್ರವಾಹ ಹಾಗೂ ಭೂಕಾಂತೀಯ ಚಟುವಟಿಕೆಗಳಿಗೆ ಇರುವ ಸಂಬಂಧವನ್ನು ಮೊದಲಿಗೆ ಸ್ಪಷ್ಟವಾಗಿ ವಿವರಿಸಿದರು. ಮುಂದೆ 1963 ರಿಂದ 1966ರ ತನಕ ರಾಯರು ಅಮೆರಿಕದ ಡಲ್ಲಾಸ್‍ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯ ಸೇರಿ ಪಯೊನೀರ್-6, 7, 8 ಮತ್ತು 9 ಸುದೂರ ಬಾಹ್ಯಾಕಾಶ ಶೋಧನ ನೌಕೆಗಳು ಮತ್ತು ಎಕ್ಸ್‍ಪ್ಲೋರರ್-34, 41 ಎಂಬ ಉಪಗ್ರಹಗಳಿಗೆ ಸಂಬಂಧಿಸಿದ ವಿಶ್ವಕಿರಣ ಪ್ರಯೋಗಗಳ ಪ್ರಧಾನ ಸಂಶೋಧಕರಾದರು. ಆ ವಿಶ್ವವಿದ್ಯಾಲಯದ ನೈಋತ್ಯ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು.

ಮುಂದೆ ಭಾರತೀಯ ಅಂತರಿಕ್ಷ ಕಾರ್ಯಕ್ರಮದ ನೇತಾರರಾದ ವಿಕ್ರಂ ಸಾರಾಭಾಯ್ ಅವರ ಕರೆಗೆ ಓಗೊಟ್ಟು ರಾವ್ ಅವರು 1966ರಲ್ಲಿ ಭಾರತಕ್ಕೆ ಹಿಂತಿರುಗಿ ಅಹಮದಾಬಾದಿನ ಫಿಜಿಕಲ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆಗೆ ಸಹಪ್ರಾಧ್ಯಾಪಕರಾಗಿ ಸೇರಿದರು. 1969ರಲ್ಲಿ ತಿರುವನಂತಪುರದ ಬಳಿಯ ತುಂಬಾ ಕೇಂದ್ರದಲ್ಲಿ ಉಪಗ್ರಹವ್ಯವಸ್ಥಾ ವಿಭಾಗವನ್ನು ಪ್ರಾರಂಭಿಸಲು ವಿಕ್ರಂ ಸಾರಾಭಾಯ್ ರಾಯರನ್ನು ಕೇಳಿಕೊಂಡರು. ಉಪಗ್ರಹ ವ್ಯವಸ್ಥಾಯೋಜನೆ ಬೆಂಗಳೂರಿನಲ್ಲಿ 1972ರಲ್ಲಿ ಪ್ರಾರಂಭವಾದಾಗ ರಾಯರು ಆ ಯೋಜನೆಯ ನಿರ್ದೇಶಕರಾದರು. ಅನಂತರ ರಾಯರ ನೇತೃತ್ವದಲ್ಲಿ ಭಾರತದ ಪ್ರಥಮ ಕೃತಕ ಭೂ ಉಪಗ್ರಹ ಆರ್ಯಭಟ ಕೇವಲ ಮೂರು ವರ್ಷಗಳ ಅವಧಿಯಲ್ಲಿ ನಿರ್ಮಾಣವಾಯಿತು.

ಆರ್ಯಭಟ ಉಪಗ್ರಹವನ್ನು ಯೋಜಿಸಿ, ಆಲೇಖ್ಯಿಸಿ ನಿರ್ಮಿಸಿದ ಯುವ ವಿe್ಞÁನಿಗಳ ತಂಡವನ್ನೇ ಮುಂದಿಟ್ಟುಕೊಂಡು ರಾಯರು ಮುಂದೆ ಇಸ್ರೊ ಉಪಗ್ರಹ ಕೇಂದ್ರವನ್ನು ಬೆಂಗಳೂರಿನ ಪೀಣ್ಯ ಎಂಬಲ್ಲಿ ಸ್ಥಾಪಿಸಿದರು. ಪೀಣ್ಯದ ಕೈಗಾರಿಕಾ ಪ್ರದೇಶದ ಷೆಡ್ಡುಗಳಲ್ಲಿ ಪ್ರಾರಂಭವಾದ ಆ ಕೇಂದ್ರ ಈಗ ಅನೇಕ ಕೇಂದ್ರಗಳನ್ನೊಳಗೊಂಡ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಇವರು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದಾಗ ಅನೇಕ ಪ್ರಾಯೋಗಿಕ ಹಾಗೂ ವೈe್ಞÁನಿಕ ಉಪಗ್ರಹಗಳು 1975 ಹಾಗೂ 1984 ರ ನಡುವಿನ ಅವಧಿಯಲ್ಲಿ ನಿರ್ಮಾಣವಾದವು. 1970ರ ದಶಕದ ಅಂತ್ಯ ಹಾಗೂ 1980ರ ದಶಕದ ಆದಿಯಲ್ಲಿ ಅನುಕ್ರಮವಾಗಿ ನಿರ್ಮಾಣವಾದ ಭಾಸ್ಕರ-1 ಮತ್ತು 2, 1980ರ ದಶಕದ ಆದಿಯಲ್ಲಿ ಅಂತರಿಕ್ಷಕ್ಕೆ ತೆರಳಿದ ಆ್ಯಪಲ್ ಎಂಬ ಪ್ರಾಯೋಗಿಕ ಸಂಪರ್ಕೋಪಗ್ರಹ ಹಾಗೂ 1980ರ ದಶಕದಲ್ಲಿ ನಿರ್ಮಾಣವಾದ ಮೂರು ರೋಹಿಣಿ ಉಪಗ್ರಹಗಳು - ಇವೇ ಆ ಉಪಗ್ರಹಗಳಾಗಿವೆ.

ರಾಯರ ಸಾಮಥ್ರ್ಯವನ್ನು ಗಮನಿಸಿದ ಭಾರತ ಸರ್ಕಾರ 1984ರಲ್ಲಿ ಇವರನ್ನು ಇಸ್ರೊ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಿತು. ಆ ಮೊದಲು ಸಂಸ್ಥೆಯ ಮುಖ್ಯಸ್ಥರಾಗಿದ್ದ ಸತೀಶ್ ಧಾವನ್‍ರಿಂದ ಅಧಿಕಾರ ವಹಿಸಿಕೊಂಡ ರಾವ್ ಸುಮಾರು ಒಂದು ದಶಕದ ಕಾಲ ಭಾರತೀಯ ಅಂತರಿಕ್ಷ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಆ ಅವಧಿಯಲ್ಲಿ ಇವರು ಅಂತರಿಕ್ಷ ಆಯೋಗದ ಮುಖ್ಯಸ್ಥರು ಹಾಗೂ ಭಾರತ ಸರ್ಕಾರದ ಅಂತರಿಕ್ಷ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದರು. ಆ ನಡುವೆ `ಸ್ರಾಸ್ ಸರಣಿಯ ಅನೇಕ ವೈe್ಞÁನಿಕ ಉಪಗ್ರಹಗಳು ಹಾಗೂ ಐ.ಆರ್.ಎಸ್. ಮತ್ತು ಇನ್ಸಾಟ್-2 ಸರಣಿಯ ಅನ್ವಯಿಕ (ಅಪ್ಲಿಕೇಷನ್ಸ್) ಉಪಗ್ರಹಗಳು ಯಶಸ್ವಿಯಾಗಿ ನಿರ್ಮಾಣಗೊಂಡವು ಮಾತ್ರವಲ್ಲ ಉಡಾವಣೆ ಗೊಂಡವು ಕೂಡ. ಅದಕ್ಕೂ ಮೊದಲೇ ಉಪಗ್ರಹಗಳು ಸಂಪರ್ಕ ಹಾಗೂ ಹವಾವೀಕ್ಷಣಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುವುದು ಪ್ರಾರಂಭವಾಗಿತ್ತು. ಉಪಗ್ರಹ ತಂತ್ರe್ಞÁನ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದ್ದ ಆ ವೇಳೆಯಲ್ಲಿ ರಾಯರು ಅಂತಾರಾಷ್ಟ್ರೀಯ ಆಸ್ಟ್ರೊನಾಟಿಕಲ್ ಫೆಡರೇಷನ್ನಿನ ಉಪಾಧ್ಯಕ್ಷರಾಗಿದ್ದಾಗ (ವೈಸ್ ಚೇರ್ಮನ್) ಬೆಂಗಳೂರಿನಲ್ಲಿ ಆ ಫೆಡರೇಷನ್ನಿನ ಅಧಿವೇಶನ 1988 ರಲ್ಲಿ ನಡೆದದ್ದು ಇವರ ಕಾರ್ಯಯಶಸ್ಸಿನ ದ್ಯೋತಕವಾಗಿದೆ. ರಾವ್ ಅವರು ಇಸ್ರೊ ಸಂಸ್ಥೆಯಿಂದ ನಿವೃತ್ತಿ ಹೊಂದಿದ ಸುಮಾರಿಗೆ ಭಾರತದ ಸ್ವದೇಶಿ ರಾಕೆಟ್ ಕಾರ್ಯಕ್ರಮವೂ ಪೂರ್ಣಪ್ರಮಾಣದ ಯಶಸ್ಸನ್ನು ಕಾಣುವ ಹಂತಕ್ಕೆ ಬಂತು. ಅಂತರಿಕ್ಷ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತವೂ ಒಂದು ಶಕ್ತರಾಷ್ಟ್ರ ಎಂಬ ನಂಬಿಕೆ ಹೊರಪ್ರಪಂಚಕ್ಕೆ ಮೂಡಿದ್ದು ರಾಯರು ಅಂತರಿಕ್ಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾಗಲೇ. ಭಾರತದ ಉಪಗ್ರಹ ಹಾಗೂ ಇದೇ ಅಂತರಿಕ್ಷ ಕಾರ್ಯಕ್ರಮದ ಮುಖ್ಯಸ್ಥರಾಗಿದ್ದ ವೇಳೆಯಲ್ಲೂ ರಾಯರು ವೈe್ಞÁನಿಕ ಸಂಶೋಧನೆಯಲ್ಲಿ, ಅದರಲ್ಲೂ ಮುಖ್ಯವಾಗಿ ಎಕ್ಸ್-ಕಿರಣಗಳ ಹಾಗೂ ಗ್ಯಾಮಾಕಿರಣಗಳ ನೆರವಿನಿಂದ ಆಕಾಶಕಾಯಗಳ ರಹಸ್ಯವನ್ನು ಭೇದಿಸುವ ಸಂಬಂಧದಲ್ಲಿ ಆಸಕ್ತಿ ವಹಿಸಿದ್ದರು.

ಖ್ಯಾತವಿe್ಞÁನಿ ಹಾಗೂ ಆಡಳಿತಗಾರರಾದ ರಾವ್ ಉತ್ತಮ ಉಪನ್ಯಾಸಕರು ಮಾತ್ರವಲ್ಲ ಒಳ್ಳೆಯ ಬರೆಹಗಾರರೂ ಕೂಡ. ಇವರು ಬರೆದ ನಿರಂತರ ಅಭಿವೃದ್ಧಿಗಾಗಿ ಅಂತರಿಕ್ಷ ತಂತ್ರe್ಞÁನ ಎಂಬ ಅರ್ಥ ಬರುವ ಇಂಗ್ಲಿಷ್ ಪುಸ್ತಕಕ್ಕೆ ಅಂತಾರಾಷ್ಟ್ರೀಯ ಆಸ್ಟ್ರೊನಾಟಿಕಲ್ ಅಕೆಡಮಿಯಿಂದ ಅತ್ಯುತ್ತಮ ಪುಸ್ತಕವೆಂಬ ಪುರಸ್ಕಾರ ದೊರೆತಿದೆ. ರಾವ್ ಅವರು ಸ್ವತಂತ್ರವಾಗಿಯೂ ಇತರರ ಸಹಯೋಗದಿಂದಲೂ ಬರೆದ ಅನೇಕ ಸಂಶೋಧನ ಲೇಖನಗಳು ಅಂತಾರಾಷ್ಟ್ರೀಯ ವಿe್ಞÁನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಸಾಧನೆಯಿಂದಾಗಿ ರಾಯರು 1976 ರಷ್ಟು ಹಿಂದೆಯೇ ಪದ್ಮಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ಪಡೆದರು. ಹರಿ ಓಂ ಆಶ್ರಮ ಪ್ರಾಯೋಜಿತ ವಿಕ್ರಂ ಸಾರಾಭಾಯ್ ಸಂಶೋಧನ ಪ್ರಶಸ್ತಿ, ಎಂಜಿನಿಯರಿಂಗ್ ವಿe್ಞÁನಗಳಲ್ಲಿ ನೀಡಲಾಗುವ ಶಾಂತಿಸ್ವರೂಪ್ ಭಾಟ್‍ನಗರ್ ಪ್ರಶಸ್ತಿ, ಭಾರತದ ರಾಷ್ಟ್ರೀಯ ವಿe್ಞÁನ ಅಕೆಡಮಿ ನೀಡುವ ಪಿ.ಸಿ. ಮೆಹಲನೋಬಿಸ್ ಪದಕ ಹಾಗೂ ಶಾಂತಿನಿಕೇತನದಲ್ಲಿರುವ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡುವ 1996ರ ಸಾಲಿನ ರವೀಂದ್ರ ಪುರಸ್ಕಾರ (1998 ಜನವರಿಯಲ್ಲಿ ನೀಡಿಕೆ) - ಇವು ರಾಷ್ಟ್ರಮಟ್ಟದಲ್ಲಿ ಇವರಿಗೆ ದೊರೆತಿರುವ ಕೆಲವು ಪ್ರಶಸ್ತಿಗಳಾಗಿವೆ. ಅಮೆರಿಕದ ಅಂತರಿಕ್ಷ ಸಂಸ್ಥೆ, `ನಾಸಾದ ಗ್ರೂಪ್ ಅಚೀವ್‍ಮೆಂಟ್ ಪ್ರಶಸ್ತಿ, ಹಿಂದಿನ ಸೋವಿಯತ್ ಒಕ್ಕೂಟದ ಗಗಾರಿನ್ ಪದಕ, ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ನೀಡುವ ಆಲನ್ ಬಿ. ಎಮಿಲ್ ಪ್ರಶಸ್ತಿ (1992), ಅಂತರಿಕ್ಷ ಶಿಕ್ಷಣಕ್ಕಾಗಿ ಅಂತಾರಾಷ್ಟ್ರೀಯ ಆಸ್ಟ್ರೊನಾಟಿಕಲ್ ಫೆಡರೇಷನ್ ನೀಡುವ ಫರಂಕ್ ಜೆ. ಮಲೀನ ಪ್ರಶಸ್ತಿ - ಇವು ರಾಯರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂದಿರುವ ಪ್ರಶಸ್ತಿಗಳಾಗಿವೆ.
ಇದರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯ ನೀಡಿದ (1976) ಗೌರವ ಡಾಕ್ಟೊರೇಟ್ ಪದವಿಯೂ ಸೇರಿದಂತೆ ಕೆಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ನೀಡಿ ಇವರನ್ನು ಗೌರವಿಸಿದೆ.

1997ರ ಜೂನ್‍ನಲ್ಲಿ ರಾವ್ ಅವರು ಶಾಂತಿಯುತ ಕೆಲಸಗಳಿಗಾಗಿ ಅಂತರಿಕ್ಷವನ್ನು ಬಳಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮಿತಿಗೆ ಚುನಾಯಿತರಾದರು. ಅನಂತರ ಆ ವರ್ಷದ ಅಂತ್ಯದಲ್ಲಿ ಇವರನ್ನು ಭಾರತದಲ್ಲಿ ದೂರದರ್ಶನ ಮತ್ತು ಬಾನುಲಿ ವ್ಯವಸ್ಥೆಗಳನ್ನು ನಿಯಂತ್ರಿಸುವ ಸಂಸ್ಥೆ ಪ್ರಸಾರ ಭಾರತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 1998ರ ಪ್ರಾರಂಭದಲ್ಲೂ ಇವರು ಅಂತರಿಕ್ಷ ಆಯೋಗದ ಸದಸ್ಯರಾಗಿದ್ದರು.   

ಗ್ರಾಮೀಣ ಪ್ರದೇಶಗಳಿಗೆ ತ್ವರಿತವಾಗಿ ಶಿಕ್ಷಣವನ್ನು ನೀಡುವಲ್ಲಿ ಸಂಪರ್ಕೋಪಗ್ರಹಗಳನ್ನು ಬಳಸಿಕೊಳ್ಳುವುದಕ್ಕೆ ಹಾಗೂ ಸುದೂರಸಂವೇದಿ (ರಿಮೋಟ್ ಸೆನ್ಸಿಂಗ್) ಉಪಗ್ರಹಗಳಿಂದ ದೊರಕುವ ಚಿತ್ರರೂಪದ (ಇಮೇಜರೀಸ್) ಮಾಹಿತಿಯನ್ನು ಭೂಮಿಯ ಮೇಲಿನ ಇತರ ಮೂಲಗಳಿಂದ ದೊರೆತ ಮಾಹಿತಿಯೊಂದಿಗೆ ಕ್ರೋಡೀಕರಿಸಿ ನಿರಂತರ ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಯರಿಗೆ ವಿಶೇಷ ಆಸಕ್ತಿಯಿದೆ. ಇತ್ತೀಚೆಗೆ ನಾಸಾ ಸಂಸ್ಥೆ ಪ್ರಕಟಿಸಿದ ಅತ್ಯಂತ ಕಾರ್ಯಶೀಲ ವ್ಯಕ್ತಿಗಳ ಪಟ್ಟಿಯಲ್ಲಿ ರಾವ್ ಅವರ ಹೆಸರು ಮೊದಲ ಹತ್ತರಲ್ಲೇ ಇದೆ. 				
(ಬಿ.ಆರ್.ಜಿ.ಪಿ.)

ಪರಿಷ್ಕರಣೆ:
ಡಾ|| ಬಿ. ಎಸ್. ಶೈಲಜಾ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ